UK Express Logo

ಮಾದಕ ವಸ್ತು ಸಿಗದ್ದಕ್ಕೆ ರೊಚ್ಚಿಗೆದ್ದ ಕೈದಿಗಳು; ಜೈಲರ್, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

By UKExpress on 12/10/2025
Featured Image ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಜೈಲರ್ ಹಾಗೂ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಜೈಲರ್ ಮತ್ತು ಇತರೆ ಸಿಬ್ಬಂದಿಗಳನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ: ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂಬುವವರೇ ದಾಂಧಲೆ ನಡೆಸಿದ ಆರೋಪಿಗಳು. ಇವರು ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಮಂಗಳೂರು ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ, ಸುರಕ್ಷತಾ ದೃಷ್ಟಿಯಿಂದ ಇವರನ್ನು ಎರಡು ತಿಂಗಳ ಹಿಂದಷ್ಟೇ ಕಾರವಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಮಾದಕ ವಸ್ತುಗಳಿಗಾಗಿ ಡಿಮ್ಯಾಂಡ್: ಕಾರವಾರ ಜೈಲಿನಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಪೂರೈಕೆಯ ಮೇಲೆ ಕಠಿಣ ನಿಗಾ ಇಡಲಾಗಿತ್ತು. ಇದರಿಂದ ಕಂಗಾಲಾಗಿದ್ದ ಆರೋಪಿಗಳು, ತಮಗೆ ಮಾದಕ ವಸ್ತುಗಳನ್ನು ಪೂರೈಸುವಂತೆ ಜೈಲರ್ ಮೇಲೆ ಒತ್ತಡ ಹೇರುತ್ತಿದ್ದರು. ಜೈಲರ್ ಹಾಗೂ ಸಿಬ್ಬಂದಿ ಇದಕ್ಕೆ ಒಪ್ಪದಿದ್ದಾಗ, ಕೋಪಗೊಂಡ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ರೂಮಿನ ಬಾಗಿಲು ಒಡೆದು, ಏಕಾಏಕಿ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾರೆ.

ಎಸ್ಪಿ ಹೇಳಿದ್ದೇನು? ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, "ಆರೋಪಿ ಮೊಹಮ್ಮದ್ ಅಬ್ದುಲ್ ಫಯಾನ್ ಮೇಲೆ ಈಗಾಗಲೇ 13 ಪ್ರಕರಣಗಳಿವೆ ಹಾಗೂ ಕೌಶಿಕ್ ನಿಹಾಲ್ ಮೇಲೆ 4 ಪ್ರಕರಣಗಳಿವೆ. ಜೈಲಿನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಬಂಧ ಹೊಸದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಸಾಗಾಟ ಜಾಲದ ಮೇಲೂ ಕಠಿಣ ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.