UK Express Logo

ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಯಲ್ಲಾಪುರ ಪೊಲೀಸರು - ಆರೋಪಿ ಬಂಧನ, ಕದ್ದ ಸ್ಕೂಟಿ ವಶಕ್ಕೆ

By UKExpress on 12/10/2025
Featured Image ಯಲ್ಲಾಪುರ: ಪಟ್ಟಣದಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯ ಎಸಗಿದ್ದ ಆರೋಪಿಯನ್ನು ಬಂಧಿಸಿ, ಕದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ನಿವಾಸಿ ಪ್ರಕಾಶ ಇನಾಸ್ ಸಿದ್ದಿ (26) ಬಂಧಿತ ಆರೋಪಿ. ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ನಿವಾಸಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಎಂಬುವವರು ತಮ್ಮ ಮನೆಯ ಎದುರು (ಎಮ್.ಹೆಚ್ ನಾಯ್ಕ ಕಂಪೌಂಡ ಹತ್ತಿರ) ನಿಲ್ಲಿಸಿದ್ದ ಕಪ್ಪು ಬಣ್ಣದ ಟಿವಿಎಸ್ ಜುಪಿಟರ್ (KA-31/EF-7293) ಸ್ಕೂಟಿಯನ್ನು ಕಳೆದ ಅಕ್ಟೋಬರ್ 15, 2025 ರಂದು ಕಳ್ಳತನ ಮಾಡಲಾಗಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಜಾಡು ಹಿಡಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಇಂದು (ಡಿ.05) ಆರೋಪಿ ಪ್ರಕಾಶ ಸಿದ್ದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತನ್ನ ಸಹಚರನೊಂದಿಗೆ ಸೇರಿ ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಕಳುವಾದ ಸ್ಕೂಟಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್., ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಹಾಗೂ ಜಗದೀಶ ಎಮ್., ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಮೇಶ ಹನಾಪುರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬಳಿ, ಶೇಡಜಿ ಚೌಹಾಣ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಪರಮೇಶ ಅವರು ಪ್ರಮುಖ ಪಾತ್ರ ವಹಿಸಿದ್ದು, ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.