ಭಟ್ಕಳ: ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಲಾರಿಯಲ್ಲಿ ಅಕ್ರಮವಾಗಿ ಹಾಗೂ ಅಮಾನವೀಯವಾಗಿ ಎತ್ತುಗಳನ್ನು ಸಾಗಿಸುತ್ತಿದ್ದ ಜಾಲವೊಂದನ್ನು ಭಟ್ಕಳ ಪೊಲೀಸರು ಭೇದಿಸಿದ್ದಾರೆ. ಇಲ್ಲಿನ ತೆಂಗಿನಗುಂಡಿ ಕ್ರಾಸ್ ಬಳಿ ಗುರುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ, 10 ಎತ್ತುಗಳನ್ನು ರಕ್ಷಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಆಜಾದ್ ನಗರದ ನಿವಾಸಿ ಅಫ್ಜಲ್ ಅಲಿ, ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಚಾಲಕ ಶಂಭುಲಿಂಗಯ್ಯ ಹಿರೇಮಠ, ಗುತ್ತಲ್ ನಿವಾಸಿ ಸಂತೋಷ್ ಬೋರಾತ್ ಹಾಗೂ ದಿಡಗೂರು ನಿವಾಸಿ ದೇವರಾಜ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ದಿನಾಂಕ 05/12/2025 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದೆ. ಹಾವೇರಿ ಮೂಲದ ಮಲ್ಲಿಕಾರ್ಜುನ ಶಿವಪ್ಪ ಕಡ್ಲಿ ಎಂಬುವವರಿಗೆ ಸೇರಿದ ಐಚರ್ ಲಾರಿಯಲ್ಲಿ ಯಾವುದೇ ಅಧಿಕೃತ ಪಾಸು ಅಥವಾ ಪರವಾನಗಿ ಇಲ್ಲದೇ ಎತ್ತುಗಳನ್ನು ತುಂಬಿಕೊಂಡು ಬರಲಾಗುತ್ತಿತ್ತು. ವಾಹನವನ್ನು ತಪಾಸಣೆ ನಡೆಸಿದಾಗ, ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಿಸುತ್ತಿರುವುದು ಕಂಡುಬಂದಿದೆ.
ಕಾರ್ಯಾಚರಣೆಯಲ್ಲಿ ಅಂದಾಜು 5 ಲಕ್ಷ ರೂ. ಮೌಲ್ಯದ 10 ಎತ್ತುಗಳು ಹಾಗೂ ಸಾಗಾಟಕ್ಕೆ ಬಳಸಿದ 15 ಲಕ್ಷ ರೂ. ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ, ಪ್ರಾಣಿ ದಯಾ ಸಂಘದ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿ ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
